ಕಾಟನ್, ನಥೇನಿಯಲ್

1705-1788. ಇಂಗ್ಲೇಂಡಿನ ವೈದ್ಯ ಹಾಗೂ ಕವಿ. ವರ್ತಕನ ಮಗನಾದ ಈತ ಹಾಲೆಂಡಿನ ಲೈಯ್ಡನ್ ನಗರದಲ್ಲಿ ವೈದ್ಯವಿದ್ಯಾಭ್ಯಾಸ ಮಾಡಿ 1740 ರಲ್ಲಿ ಇಂಗ್ಲೆಂಡಿನ ಸೆಂಟ್ ಆಲ್ಬನ್ಸ್ ನಗರದಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ. ಇಲ್ಲಿಯೇ ಕಾಟನ್ ಒಂದು ಖಾಸಗಿ ಹುಚ್ಚಾಸ್ಪತ್ರೆಯನ್ನು ಸ್ಥಾಪಿಸಿದ. ಪ್ರಸಿದ್ಧ ಕವಿ ವಿಲಿಯಂ ಕೌಪರ್‍ಗೆ ಬುದ್ಧಿವಿಕಲ್ಪವಾಗಿ ಆತ್ಮಹತ್ಯೆಗೆ ತೊಡಗಿದಾಗ ಆತನನ್ನು ಕಾಟನ್‍ನ ಹುಚ್ಚಾಸ್ಪತ್ರೆಗೆ ಸೇರಿಸಲಾಯಿತು. ಕಾಟನ್ ವಿಶ್ವಾಸದ ಸೇವೆ, ಆತನ ಧಾರ್ಮಿಕ ಪ್ರವೃತ್ತಿ ಹಾಗೂ ಶ್ರಮದ ಫಲದಿಂದಾಗಿ ಕೌಪರನ ಬುದ್ಧಿ ಸಾಂತ್ವನಗೊಂಡಿತು. ಈ ಕವಿಯ ಸ್ನೇಹದಿಂದಾಗಿ ಕಾಟನ್ ಹೆಸರು ಸಾಹಿತ್ಯಪ್ರಪಂಚದಲ್ಲಿ ಉಳಿದಿದೆ.

 ಜಾನ್ ಗೇ ಎಂಬಾತ ಬರೆದ ನೀತಿಕಥೆಗಳನ್ನು ಕಾಟನ್ ಪದ್ಯರೂಪದಲ್ಲಿ, ಕಿರಿಯರಿಗಾಗಿ ರಚಿಸಿ ಪ್ರಕಟಿಸಿದ್ದಾನೆ. ಆದರೆ ಈ ಪದ್ಯಗಳು ಜನರ ನೆನಪಿನಲ್ಲಿ ಚಿರಕಾಲ ಉಳಿಯುವಂಥವಲ್ಲ. ಕಾಟನ್ ಉತ್ತಮ ವೈದ್ಯನೆಂದು ಪ್ರಸಿದ್ಧನೇ ಹೊರತು ಕವಿಯಾಗಿ ಅಲ್ಲ.

(ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ